ಗಂಗೇಶ-
 	ತತ್ತ್ವಚಿಂತಾಮಣಿಯ ಕರ್ತೃ. ನವೀನ ನ್ಯಾಯದಲ್ಲಿ ಹೆಸರಾಂತ ತಾರ್ಕಿಕ. ಗಂಗೇಶೋಪಾಧ್ಯಯನೆಂದೂ ಕರೆವುದಿದೆ. ನ್ಯಾಯ ವೈಶೇಷಿಕ ದರ್ಶನಗಳ ಸಮ್ಮಿಲನದಿಂದ ಉಂಟಾದ ನವ್ಯಪಂಥದ ಪ್ರವರ್ತಕ. ಕಾಲ ಹದಿನಾಲ್ಕನೆಯ ಶತಮಾನ. ಮಿಥಿಲೆ ಜನ್ಮಸ್ಥಳ.

	ಭಾರತೀಯ ಷಡ್‍ದರ್ಶನದಲ್ಲಿ ಗೌತಮರ ನ್ಯಾಯದರ್ಶನ ಮತ್ತು ಕಣಾದರ ವೈಶೀಷಿಕ ದರ್ಶನ ಈ ಎರಡರ ಉಗಮ ಮತ್ತು ವಿಕಾಸದ ಕಾಲಮಾನಗಳನ್ನು ಸೂತ್ರಗಳ ಕಾಲ, ಭಾಷ್ಯಗಳ ಕಾಲ ಮತ್ತು ತಾರ್ಕಿಕ ಸಾಹಿತ್ಯದ ಕಾಲವೆಂದು ಮೂರು ವಿಭಾಗಗಳನ್ನಾಗಿ ಮಾಡಬಹುದು. ಮೂರನೆಯದು ನವೀನ ನ್ಯಾಯದ ಕಾಲವೆಂದು ಪ್ರಸಿದ್ಧಿಯಾಗಿದೆ. ಈ ಕಾಲದ ನ್ಯಾಯ ವೈಶೇಷಿಕ ದರ್ಶನ ಗ್ರಂಥಗಳು ಮೂಲಸೂತ್ರಗಳ ಮುಖ್ಯ ವಿಷಯಗಳಾದ ಉದ್ದೇಶ, ಪದಾರ್ಥಗಳ ವಿಭಾಗ, ಲಕ್ಷಣ ಮತ್ತು ಪರೀಕ್ಷಣ-ಇವುಗಳ ವಿಶದೀಕೃತ ಪ್ರತಿಪಾದನೆಯ ಕಡೆಗೆ ಹೆಚ್ಚು ಲಕ್ಷ್ಯವಿಡದೆ ಯಥಾರ್ಥಜ್ಞಾನ ಸಾಧನಗಳಾದ ಪ್ರತ್ಯಕ್ಷಾದಿ ನಾಲ್ಕು ಪ್ರಮಾಣಗಳ ಸೂಕ್ಷ್ಮಾತಿಸೂಕ್ಷ್ಮ ಪರಿಶೀಲನೆಗೆ ಮೀಸಲಾಗಿದೆ. ಇಂಥ ಗ್ರಂಥಗಳಲ್ಲಿ ಪ್ರಸಿದ್ಧವಾದುದು ತತ್ತ್ವ ಚಿಂತಾಮಣಿ. ಇದು ಉದಯನಾಚಾರ್ಯರ ಕಿರಣಾವಳೀ ಗ್ರಂಥವಾದ ಮೇಲೆ ಬಂದ ಮತ್ತೊಂದು ಬೃಹದ್‍ಗ್ರಂಥ. ಇದು ಪೂರ್ವಸೂರಿಗಳ ರಚನಾತ್ಮಕವೂ ವಿಮರ್ಶಾತ್ಮಕವೂ ತಾರ್ಕಿಕವೂ ಆದ ದಾರ್ಶನಿಕ ವಿಷಯನಿರೂಪಣೆಗೆ ಹೊಸ ತಿರುವೊಂದನ್ನಿತ್ತು ನವ್ಯ ಪಂಥದ ಆಚಾರ್ಯ ಕೃತಿಯಾಯಿತು. ಎಂದು ಮಹಾಮಹೋಪಾಧ್ಯಾಯ ಕುಪ್ಪುಸ್ವಾಮಿ ಶಾಸ್ತ್ರಿಗಳ ಅಭಿಪ್ರಾಯ. ಇದು ವರೆಗೆ ಪದಾರ್ಥಶಾಸ್ತ್ರವಾಗಿದ್ದ ನ್ಯಾಯ ವೈಶೇಷಿಕ ದರ್ಶನ ಮುಂದೆ ಪ್ರಮಾಣಶಾಸ್ತ್ರವಾಯಿತು. ಪ್ರತ್ಯಕ್ಷ, ಅನುಮಾನ, ಉಪಮಾನ ಮತ್ತು ಶಬ್ದಪ್ರಮಾಣಗಳನ್ನು ಅಧಿಕರಿಸಿ ನಾಲ್ಕು ಖಂಡಗಳಲ್ಲಿ ರಚಿತವಾದ ಈ ಗ್ರಂಥದಲ್ಲಿ ನವ್ಯವಾದ ಅವಚ್ಛೇದಕ, ಅವಚ್ಛೇದ್ಯ, ನಿರೂಪಕ, ನಿರೂಪ್ಯ, ಅನುಯೋಗಿ, ಪ್ರತಿಯೋಗಿ ಮುಂತಾದ ತಾರ್ಕಿಕ ಪದಪುಂಜಗಳು ಬಳಕೆಗೆ ಬಂದುವು.

	ತತ್ತ್ವಚಿಂತಾಮಣಿ ಬಂಗಾಳದಲ್ಲಿ ಅಭೂತಪೂರ್ವವೂ ಅನ್ಯಾದೃಶವೂ ಆದ ತಾರ್ಕಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಿತು. ನವ್ಯ ಪಂಥೀಯ ಆಚಾರ್ಯ ಪರಂಪರೆಯೊಂದರ ಉದಯಕ್ಕೆ ಕಾರಣವಾಯಿತು. ಆ ಪರಂಪರೆಯಲ್ಲಿ ಗಂಗೇಶನ ಮಗ ವರ್ಧಮಾನ, ಬಂಗಾಳದ ಜಗದ್ವಿಖ್ಯಾತ ದಾರ್ಶನಿಕ ಕೃಷ್ಣಚೈತನ್ಯನ (ಗೌರಾಂಗ) ವಿದ್ಯಾಗುರು ವಾಸುದೇವ ಸಾರ್ವಭೌಮ, ರಘುನಾಥ ಶಿರೋಮಣಿ, ಮಥುರಾನಾಥ ಭಟ್ಟಾಚಾರ್ಯ, ಜಗದೀಶ ಭಟ್ಟಚಾರ್ಯ ಮತ್ತು ಇವರೆಲ್ಲರಿಗೂ ತಿಲಕಪ್ರಾಯನಾದ ಗದಾಧರ ಭಟ್ಟಚಾರ್ಯ-ಇವರು ಪ್ರಮುಖರಾದವರು.						     (ಸಿ.ಜಿ.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ